ಹಿಮರೇಖೆ
	ನೆಲಮಟ್ಟದಿಂದ ಎತ್ತರಕ್ಕೆ ಹೋದಂತೆಲ್ಲ ಉಷ್ಣತೆ ಕ್ರಮೇಣ ಕಡಿಮೆಯಾಗುತ್ತ ಒಂದು ನಿರ್ದಿಷ್ಟ ಎತ್ತರದಲ್ಲಿ ನೀರಿನ ಆವಿ ಹಿಮವಾಗಿ ಮಾರ್ಪಡುವ ಹಂತ (ಸ್ನೋ ಲೈನ್). ಈ ಪರಿಮಿತಿಯ ಆಚೆಗೆ ಹಿಮಪರಿಸ್ಥಿತಿಯೇ ಇರುತ್ತದೆ. ಸಮುದ್ರಮಟ್ಟದಿಂದ ಹಿಮರೇಖೆಯ ಮಟ್ಟ ಎಲ್ಲ ಪ್ರದೇಶಗಳಲ್ಲೂ ಒಂದೇ ಇರುವುದಿಲ್ಲ. ಭೂಭಾಗದ ನೈಸರ್ಗಿಕ ಸನ್ನಿವೇಶ, ಸಮುದ್ರಮಟ್ಟದಿಂದ ಅದರ ಎತ್ತರ, ಅಲ್ಲಿಯ ಹವಾಗುಣ ಈ ಮೊದಲಾದ ಅಂಶಗಳನ್ನು ಅನುಸರಿಸಿ ಹಿಮರೇಖೆಯ ಮಟ್ಟದಲ್ಲೂ ಏರುಪೇರುಗಳಾಗುತ್ತವೆ. ಭೂಚರಿತ್ರೆಯ ಹಿಂದಿನ ಯುಗಗಳಲ್ಲಿ ಹಿಮರೇಖೆಯಲ್ಲಿ ವ್ಯತ್ಯಾಸಗಳು ತಲೆದೋರಿರುವುದು ಕಂಡುಬಂದಿದ್ದರೂ ಅವನ್ನು ನಿರ್ಧರಿಸುವುದು ಬಲುಕಷ್ಟ. ಏನಿದ್ದರೂ ಚತುರ್ಥಭೂಕಲ್ಪದಲ್ಲಿ (ಕ್ವಾಟರ್ನರಿ) ಆದ ಹಿಮಯುಗದಿಂದ ಈಚೆಗೆ ಉಂಟಾದ ಬದಲಾವಣೆಗಳನ್ನು ಮಾತ್ರ ಊಹಿಸಲು ಸಾಧ್ಯ.

	ಪ್ಲೀಸ್ಟೊಸೀನ್ ಕಾಲದಲ್ಲಿ ಉತ್ತರ ಖಂಡಗಳ ಅನೇಕ ಭೂಪ್ರದೇಶ ಗಳು ಹಿಮನದಿಗಳಿಂದ ಆವರಿಸಲ್ಪಟ್ಟಿದ್ದು ಹಿಮರೇಖೆಯೂ ಬಲು ಕೆಳಮಟ್ಟದಲ್ಲಿತ್ತು ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಆಲ್ಪ್ಸ್ ಪರ್ವತ ಶ್ರೇಣಿಗಳಲ್ಲಿ ಈ ನಿದರ್ಶನಗಳನ್ನು ಕಾಣಬಹುದು. ಈ ಪರ್ವತಗಳಲ್ಲಿ ಹಿಮರೇಖೆಯಿಂದ 1000 ಮೀ ಕೆಳಭಾಗದಲ್ಲಿ ಹಿಮಪ್ರವಾಹಗಳು ಕೊನೆಗೊಳ್ಳುತ್ತವೆ. ಹಿಮಾಲಯ ಶ್ರೇಣಿಯಲ್ಲಿ ಹಿಮರೇಖೆಯಿಂದ 2000 ಮೀ ಕೆಳಭಾಗದಲ್ಲಿ ಅನೇಕ ಹಿಮನದಿಗಳು ಹರಡಿವೆ.

	ಹಿಮರೇಖೆಯ ಮಟ್ಟ ಕೇವಲ ಉಷ್ಣತೆಯನ್ನು ಮಾತ್ರವಲ್ಲದೆ ವಾಯುಮಂಡಲದಲ್ಲಿಯ ಇತರ ವ್ಯತ್ಯಾಸಗಳನ್ನೂ ಅನುಸರಿಸಿದೆ. ಧ್ರುವಗಳೆಡೆಯಲ್ಲಿ ಅತ್ಯಂತ ಕೆಳಮಟ್ಟದಲ್ಲೂ ಭೂಮಧ್ಯರೇಖೆಯ ಸಮೀಪದಲ್ಲಿ ಬಲು ಮೇಲ್ಮಟ್ಟದಲ್ಲೂ ಹಿಮರೇಖೆಗಳು ಕಂಡುಬಂದಿವೆ. ಆಟಕಾಮ ಮರುಭೂಮಿಯ ಪ್ರದೇಶದ ಎತ್ತರದಲ್ಲೂ (6850 ಮೀ), ಉತ್ತರಗೋಳಾರ್ಧದ ಗ್ರೀನ್‍ಲೆಂಡ್ ಮತ್ತು ದಕ್ಷಿಣಗೋಳಾರ್ಧದ ಹೆರಾಲ್ಡ್ ದ್ವೀಪಗಳ ಅತ್ಯಂತ ಕೆಳಮಟ್ಟದಲ್ಲೂ ಹಿಮರೇಖೆಯನ್ನು ಗುರುತಿಸಲಾಗಿದೆ.	

	(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ